ಮಾಹಿತಿ - ತಂತ್ರಜ್ಞಾನ

ಕನ್ನಡ ರಾಜ್ಯೋತ್ಸವ


ಕನ್ನಡ ಪ್ರೇಮಿಗಳಿಗೂ, ಕನ್ನಡ ಸಾಹಿತ್ಯ ಅಭಿಮಾನಿಗಳಿಗೂ, ಸಹೃದಯಿ ಓದುಗರಿಗೂ, ಸಪ್ತ ಕೋಟಿ ಕನ್ನಡಿಗರಿಗೂ ಮೊದಲನೆಯದಾಗಿ ನನ್ನ ನಮಸ್ಕಾರಗಳು‌. ಹಾಗೆಯೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಕರ್ನಾಟಕ ಅಂದ ಕೂಡಲೆ ಮನದಾಳದಲ್ಲಿ ಏನೊ ಒಂದು ಅಪೂರ್ವ ಸಂತಸ ಮನೆಮಾಡುತ್ತದೆ. ಅದು ಈ ನೆಲಕ್ಕೆ ಇರುವ ಶಕ್ತಿಯೇ ವಿನಃ ಬೇರೆ ಏನು ಅಲ್ಲ. ಈ ನೆಲದ ವೈಶಿಷ್ಟ್ಯವೇ ಹಾಗೆ. ಇಲ್ಲಿ ಜೋಗ ಜಲಪಾತ, ಪಶ್ಚಿಮ ಘಟ್ಟದ ರೀತಿಯ ಹಲವಾರು ಪ್ರಾಕೃತಿಕ ಸೊಬಗುಗಳು, ಹಂಪಿ ಐಹೊಳೆ ಮೈಸೂರು ಬನವಾಸಿ ಪಟ್ಟದಕಲ್ಲಿನಂತಹ‌ ಅಸಂಖ್ಯಾತ ಐತಿಹಾಸಿಕ ಸ್ಥಳಗಳು ಪಂಪ ರನ್ನ ಕುವೆಂಪು, ಮಾಸ್ತಿ, ದಿನಕರ್ ದೇಸಾಯಿಗಳಂತಹ ಶ್ರೇಷ್ಠ ಕವಿಗಳು, ಕೈವಾರ ತಾತಯ್ಯನಂತಹ ತ್ರಿಕಾಲ ಜ್ಞಾನಿಗಳು , ಚೆನ್ನಮ್ಮ ರಾಯಣ್ಣನಂತಹ.ಸ್ವಾತಂತ್ರ್ಯ ಪ್ರೇಮಿಗಳ , ದೇವರಾಜ ಅರಸು ದೇವೆಗೌಡರಂತಹ ಮುತ್ಸದ್ದಿ ರಾಜಕಾರಣಿಗಳು ಪಾಟಿಲ್ ಪುಟ್ಟಫ್ಪನಂತಹ ಕನ್ನಡ ಪ್ರೇಮಿಗಳ , ಬಸವಣ್ಣನಂತರ ಸಾಮಾಜಿಕ ಸುಧಾರಕ, ದಾಸ ಶ್ರೇಷ್ಠರ,ಶೃಂಗೇರಿ, ಕೆರೆಕಟ್ಟೆಯಂತಹ ಧಾರ್ಮಿಕ ಕ್ಷೇತ್ರಗಳ,ಶ್ರೀ ಶಿವಕುಮಾರ ಸ್ವಾಮೀಜಿಗಳಂತಹ ಕಾಯಕ ಯೋಗಿಗಳ ನೆಲೆ.ಇಲ್ಲಿ ಪ್ರತಿ ರಂಗದಲ್ಲೂ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ ಹಲವು ಸಾಧಕರನ್ನು ಮತ್ತು ಪ್ರಸಿದ್ಧ ಸ್ಥಳಗಳನ್ನು ಕಾಣುತ್ತೇವೆ. ಹೀಗೆ ಬರೆಯುತ್ತಾ ಹೋದರೆ ವರ್ಷವೇ ಉರುಳಿ ಹೋದಿತು.ಈ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಉದ್ದೇಶ ನಾಡಿನ ಸಮಸ್ತ ಜನತೆಗೆ ತಿಳಿದಿದೆ.

Loading...

1956 /11/1 ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ ಎಂಬ ಹೆಸರಿನ ರಾಜ್ಯ ರಚಿಸಲಾಯಿತು. ಇದಕ್ಕಾಗಿ ಕನ್ನಡ ಪ್ರೇಮಿಗಳು ಕನ್ನಡ ಪರ ಹೋರಾಟಗಾರರು ಪಟ್ಟ ಶ್ರಮ ಅಷ್ಟಷ್ಟಲ್ಲ…ಮುಂದೆ 1973/11/1 ರಂದು ಮೈಸೂರು ರಾಜ್ಯ ಕರ್ನಾಟಕ ಎಂಬ ಹೆಸರಿನಲ್ಲ್ಲಿ ಮರುನಾಮಕರಣಗೊಳ್ಳುತ್ತದೆ. ಈ ರಾಜ್ಯ ನಿರ್ಮಾಣಕ್ಕೆ ಹಿರಿಯರು ಮಾಡಿದ ಹೋರಾಟ ಪಟ್ಟ ಶ್ರಮವನ್ನೆಲ್ಲ ನೀವು ಬಲ್ಲಿರಿ.ಅದೆಷ್ಟೋ ಹೋರಾಟದ ಬಳಿಕ ರಾಜ್ಯ ಅಸ್ಥಿತ್ವಕ್ಕೆ ಬಂದಿದೆ.ಕನ್ನಡ ಸಾಹಿತ್ಯ ಮತ್ತು ಭಾಷೆಗೆ‌ ಐದು ಸಾವಿರ ವರ್ಷಗಳ ಇತಿಹಾಸವಿದೆ. ಇಷ್ಟು ಭವ್ಯ ಮತ್ತು ಸುಂದರ ಭಾಷೆ ನಮ್ಮ ಕನ್ನಡ.ಆದರೆ ಇಂದು ಕರ್ನಾಟಕದಲ್ಲೇ ಕನ್ನಡಿಗರು ಅನಾಥರಾಗುತ್ತಿದ್ದಾರೋ ಅನ್ನುವ ಭಯ ಎದುರಾಗಿದೆ.

ಆಂಗ್ಲಭಾಷೆಯ ವ್ಯಾಮೋಹಕ್ಕೆ ಇಂದಿನ ಜನತೆ ಒಳಗಾಗಿದೆ ಎನಿಸುತ್ತದೆ. ಪಾಲಕರು ಸಹ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ದಾಖಲು ಮಾಡುತಿದ್ದಾರೆ. ಅದೆಷ್ಟೋ ಕನ್ನಡ ಶಾಲೆಗಳು ಮುಚ್ಚಿವೆ. ಕನ್ನಡ ಮಾತನಾಡಿದರೆ ತಮ್ಮ ಘನತೆ ಕುಂದುತ್ತದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.ಇನ್ನೂ ನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಬಲ್ಲವರು ಸಹ ಆಡಲು ಮುಜುಗರಪಡುತ್ತಿದ್ದಾರೆ.

ಕನ್ನಡ ನಮ್ಮ ತಾಯಿಯಂತೆ. ನಮ್ಮ ತಾಯಿಗೆ ನಾವು ಗೌರವ ನೀಡದಿದ್ದರೆ ಇನ್ಯಾರು ನೀಡುತ್ತಾರೆ?ಇನ್ನೂ ಗಡಿ ಭಾಗದ ಪರಿಸ್ಥಿತಿ ಭಿನ್ನವೇನಿಲ್ಲ. ಗಡಿ ಭಾಗದಲ್ಲಿ ಕನ್ನಡದ ಮೇಲೆ ಅತ್ಯಾಚಾರ ಅಗುತ್ತಿದೆ. ಗಡಿ ಭಾಗದಿಂದ ಕರ್ನಾಟಕ ವಿಧಾನ ಸಭೆಗೆ ಆಯ್ಕೆ ಆದ ಶಾಸಕರು ಸಹ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದೆ ಅನ್ಯ ಭಾಷೆಗಳಲ್ಲಿ ಸ್ವೀಕರಿಸಲು ಮುಂದಾಗುತ್ತಿದ್ದಾರೆ.(ಹೆಸರು ಉಲ್ಲೇಖಿಸುವ ಇಚ್ಛೆಯಿಲ್ಲ.) ಹಾಗೆಂದ ಮಾತ್ರಕ್ಕೆ ನಾನು ಇತರ ಭಾಷೆಗಳನ್ನು ಅವಮಾನಿಸುತ್ತಿಲ್ಲ. ಬದಲು ಕನ್ನಡ ಕರ್ನಾಟಕದ ಮೊದಲ ಭಾಷೆಯಾಗಿರಬೇಕು ಎನ್ನುತಿದ್ದೆನೆ.

ಇತಿಹಾಸ ತಿರುವಿ ಹಾಕಿದರೆ ಕರ್ನಾಟಕದ ವಿಸ್ತಾರ ಎಷ್ಟು ಇತ್ತೆಂಬುದು ತಿಳಿಯುತ್ತದೆ. ಕಾವೇರಿ ನದಿಯಿಂದ ಗೋದಾವರಿ ನದಿವರೆಗೆ ಕರ್ನಾಟಕ ಹಬ್ಬಿತ್ತು ಎಂಬುದು ತಿಳಿಯುತ್ತದೆ. (ಶ್ರೀ ವಿಜಯ ವಿರಚಿತ ಕವಿರಾಜ ಮಾರ್ಗ ಗ್ರಂಥದ ಉಲ್ಲೇಖ.) ಆದರೆ ಇಂದು ಕೇವಲ 30 ಜಿಲ್ಲೆಗಳಿಗೆ ಮಾತ್ರ ಕರ್ನಾಟಕ ಸೀಮಿತವಾಗಿದೆ. ಗಡಿ ಭಾಗದ ಪ್ರದೇಶಗಳು ತಮ್ಮದು ಎಂಬ ವಾದ ಅಕ್ಕ ಪಕ್ಕದ ರಾಜ್ಯಗಳಿಂದ ಕೇಳಿಬರುತ್ತಿದೆ.

ಎಂ.ಇ. ಎಸ್. ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸುತ್ತಿದೆ.ಇದು ಹೊರಗಿನ ಕತೆಯಾದರೆ ಕರ್ನಾಟಕದ ಒಳಗೆ ಕೂಡಾ ಪರಿಸ್ಥಿತಿ ಭಿನ್ನವಾಗಿಲ್ಲ. ಪ್ರತ್ಯೇಕ ರಾಜ್ಯ ಬೇಕೆಂದು ಎರಡು‌ ಕಡೆಯಿಂದ ಕೂಗು ಕೇಳಿ ಬರುತ್ತಿದೆ.ಇಲ್ಲಿ ನನ್ನದೊಂದು ಮಾತು ಸ್ನೇಹಿತರೆ ಕರ್ನಾಟಕ ಒಡೆಯಬೇಕೆಂಬ ಮಾತು ಕೇಳಿ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರ ಆತ್ಮಗಳಿಗೆ ಎಷ್ಟು ನೋವಾಗುತ್ತಿರಬಹುದು ಎಂಬುದನ್ನು ಯೋಚಿಸಿದ್ದೀರಾ?ಹೀಗಾಗಿ ನನ್ನದೊಂದು ಮನವಿ ದಯಮಾಡಿ ಅಭಿವೃದ್ಧಿ ಅಥವಾ ಇನ್ಯಾವುದೋ ಕಾರಣ ನೀಡಿ ಕರ್ನಾಟಕ ವಿಭಜನೆ ಕುರಿತು ಯೋಚನೆ ಮಾಡಬೇಡದೆ ಕರ್ನಾಟಕದ ಸಂಪೂರ್ಣ ಅಭಿವೃದ್ಧಿ ಸಲುವಾಗಿ ದುಡಿಯಬೇಕಿದೆ. ಏಕತೆಯ ಮೂಲಕವೇ ಗಡಿಯಲ್ಲಿ ವಿವಾದ ಹುಟ್ಟು.ಹಾಕುತ್ತಿರವರಿಗೆ ಸೂಕ್ತ ಉತ್ತರ ನೀಡಬೇಕಿದೆ.

ಕೊನೆಯದಾಗಿ ಒಂದು ಮಾತು ಗೆಳೆಯರೇ ಕನ್ನಡಿಗರ ಪಾಲಿಗೆ ಕರ್ನಾಟಕ ರಾಜ್ಯೋತ್ಸವ ಕೇವಲ ನವೆಂಬರ್ ಒಂದನೇ ತಾರಿಖಿಗೆ ಮಾತ್ರ ಸೀಮಿತವಾಗದೆ ವರ್ಷದ ಮುನ್ನೂರ ಅರವತ್ನಾಲ್ಕು ದಿನಗಳ ಕಾಲವೂ ಕನ್ನಡ ರಾಜ್ಯೋತ್ಸವ ಆಗಿರಬೇಕು.

ಕೇವಲ ಒಂದು ದಿನ ಕನ್ನಡ ಬಾವುಟವನ್ನು ಸರ್ಕಾರಿ ಕಟ್ಟಡಗಳ ಮೇಲೆ ಹಾರಿಸಿದರೆ.ಸಾಲದು ಕನ್ನಡ ಬಾವುಟವನ್ನು ನಮ್ಮ ಹೃನ್ಮನಗಳಲ್ಲಿ ವರ್ಷಪೂರ್ತಿ ಹಾರಿಸಬೇಕು. ಆಗ ಮಾತ್ರ ಈ ಆಚರಣೆಗೆ ಒಂದು ಅರ್ಥ ಬರುತ್ತದೆ. ಕನ್ನಡ ಬಳಸೋಣ.ಕನ್ನಡ ಉಳಿಸೋಣ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ದುಡಿಯೋಣ ಎಂದು ಹೇಳುತ್ತಾ ನನ್ನ ಲೇಖನಕ್ಕೆ ಪೂರ್ಣ ವಿರಾಮ ಇಡುತ್ತೇನೆ.ಜೈ ಅಖಂಡ ಕರ್ನಾಟಕ-
ರೋಹನ್ ಪಿಂಟೋ ಗೇರುಸೊಪ್ಪ
ಚಿತ್ರಕೃಪೆ:ಆನ್ಯಶೆಟ್ಟಿ

  • 15
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...