ರಾಷ್ಟ್ರೀಯ ಸುದ್ದಿ

ಬದಲಾವಣೆಯ ಪರ್ವಕ್ಕಾಗಿ ನನ್ನನು ಬೆಂಬಲಿಸಿ :ಪ್ರಕಾಶ್ ರೈ

ಬೆಂಗಳೂರು : ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸತತ ಸೋಲು ಕಾಣುತ್ತಿರುವ ಕಾಂಗ್ರೆಸ್, ಜನಸಾಮಾನ್ಯರ ಆಶೋತ್ತರಗಳ ಈಡೇರಿಕೆಗೆ, ಬದಲಾವಣೆಯ ಪರ್ವಕ್ಕಾಗಿ ತಮ್ಮನ್ನು ಬೆಂಬಲಿಸುವ ಗಟ್ಟಿ ತೀರ್ಮಾನ ತೆಗೆದುಕೊಳ್ಳುವುದು ಒಳಿತು ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ರಾಜಕೀಯಕ್ಕೆ ಏಕೆ ಬರಬೇಕಾಯಿತು? ದೇಶದ ಪ್ರಸ್ತುತ ರಾಜಕಾರಣದಿಂದ ಜನರಿಗೆ ಆದ ಒಳಿತು,ಕೆಡುಕುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.ಮೋದಿಯನ್ನು ವಿರೋಧ ಮಾಡುವುದಕ್ಕಾಗಿ ತಾವು ರಾಜಕೀಯಕ್ಕೆ ಬಂದಿಲ್ಲ. ಅದು ನನ್ನ ಆದ್ಯತೆಯೂ ಅಲ್ಲ. ಕೋಮುವಾದಿ ವ್ಯವಸ್ಥೆಯ ವಿರುದ್ಧದ ಹೋರಾಟವೇ ಹೊರತು ಒಬ್ಬ ವ್ಯಕ್ತಿಯ ವಿರುದ್ಧ ಅಲ್ಲ ಎಂಬುದನ್ನು ಜನತೆ ಅರಿಯಬೇಕು.

ನಾನು ಒಬ್ಬ ನಟನಾಗಿ ರಾಜಕೀಯ ಪ್ರವೇಶ ಮಾಡುತ್ತಿಲ್ಲ. ರಾಜಕೀಯ ಪ್ರಜ್ಞೆಯುಳ್ಳ ಸಾಮಾನ್ಯ ನಾಗರಿಕನಾಗಿ ಹೊಣೆಗಾರಿಕೆ ನಿರ್ವಣೆಯ ಮಾಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ.ಚಿತ್ರನಟರು ಖ್ಯಾತರಾಗಿದ್ದ ಮಾತ್ರಕ್ಕೆ ಅವರು ರಾಜಕಾರಣಕ್ಕೆ ಬರುತ್ತಿದ್ದಾರೆ ಎಂಬ ಭಾವನೆ ತಪ್ಪು. ಕೇವಲ ಜನಪ್ರಿಯತೆಯನ್ನು ಇಟ್ಟುಕೊಂಡು ಗೆಲ್ಲುತ್ತೇನೆ ಎನ್ನುವುದು ಭ್ರಮೆ. ನಟರಾಗುವುದು ಜನಪ್ರಿಯತೆ ಪಡೆಯುವುದು ತಪ್ಪಲ್ಲ. ಆದರೆ ಜನರ ಕಳಕಳಿಗೆ ಸ್ಪಂದಿಸುವುದು, ಅವರ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ. ಜನರ ಬಗ್ಗೆ ಪ್ರಜ್ಞೆಯಿದೆ, ಧ್ವನಿಯಾಗುತ್ತೇನೆ, ಜನರಲ್ಲಿ ಬದಲಾವಣೆ ತರುವ ಪ್ರಜ್ಞೆಯಿದೆ ಎಂದು ಭಾವಿಸುವ ಯಾರೇ ಆದರೂ ರಾಜಕಾರಣಕ್ಕೆ ಬರಬಹುದು. ಪ್ರಕಾಶ್ ರಾಜ್ ಕೇವಲ ಒಬ್ಬ ನಟನಲ್ಲ, ದೇಶದ ಪ್ರಜೆಯಾಗಿ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನನ್ನದು.

Loading...

ಮೋದಿ ವಿರುದ್ಧ ಕೆಲವು ರಾಜಕೀಯ ಪಕ್ಷಗಳು ಒಂದಾಗುತ್ತಿರುವುದು ಅವರುಗಳ ವೈಯಕ್ತಿಕ ಅಧಿಕಾರ, ಹಿತಾಸಕ್ತಿಗಾಗಿಯೇ ಹೊರತು ದೇಶದ ಉದ್ಧಾರಕ್ಕಾಗಿ ಅಲ್ಲ. ಪ್ರಗತಿಪರ ಹೋರಾಟಗಳಲ್ಲಿ, ಗೌರಿಹತ್ಯೆ ವಿರೋಧ, ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಟಗಳಲ್ಲಿ ನಾನು ಭಾಗವಹಿಸಿದ್ದೆ,. ಆಗ ರಾಜಕೀಯ ಪ್ರವೇಶದ ಬಗ್ಗೆ ಲವಲೇಶವೂ ಚಿಂತಿಸಿರಲಿಲ್ಲ. ಆದರೆ ಬರಿ ಮಾತಿನಿಂದ ಯಾವುದೂ ಸಾಧ್ಯವಿಲ್ಲ. ಉತ್ತರ ಹುಡುಕುವುದು ಕಷ್ಟ ಎಂದು ಅನಿಸಿದಾಗ ನಾನು ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಹೊರಟೆ. ಸಂಸತ್ತಿನಲ್ಲಿ ಧ್ವನಿಯಾಗಬೇಕು ಎಂಬುದು ಮನವರಿಕೆಯಾದ ಮೇಲೆಯೇ ಸಕ್ರಿಯ ರಾಜಕಾರಣಕ್ಕೆ ಬಂದೆ ಎಂದು ತಿಳಿಸಿದ್ದಾರೆ.

ಕಡಿಮೆ ಅವಧಿಯಲ್ಲಿಯೇ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಜನರ ಬಳಿಗೆ ಹೋಗಲು ನನಗೆ ೩ ತಿಂಗಳು ಮಾತ್ರ ಸಾಕು. ನಾನು ಖಂಡಿತವಾಗಿ ಜನರನ್ನು ತಲುಪುತ್ತೇನೆ. ನನ್ನನ್ನು ನಂಬಿ. ಪ್ರಕಾಶ್ ರೈ ಎಲ್ಲರಿಗೂ ಪರಿಚಿತ ವ್ಯಕ್ತಿ. ರಾಷ್ಟ್ರೀಯ ಪಕ್ಷಗಳು ನನಗೆ ಟಿಕೇಟ್ ಕೊಡುತ್ತೇನೆ ಎಂದು ಬಂದಿದ್ದವು. ಆದರೆ ಯಾವುದೇ ಪಕ್ಷದಿಂದ ಗುರುತಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದೇನೆ ಎಂದು ನಟ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ.

  • 140
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...