ಇನ್ನಷ್ಟು

ಪಿರಿ ಪಿರಿ ಮಳೆಗೆ ಒಂಚೂರು ರೆಸ್ಟ್ ಇಲ್ವಾ?


ಎಂಥ ಸಾವ್ ಬರ್ಸ ಮಾರ್ರೆ ?!! ಈ ಪಿರಿ ಪಿರಿ ಮಳೆಗೆ ಒಂಚೂರು ರೆಸ್ಟ್ ಇಲ್ವಾ..?!!! ಬೆಳಿಗ್ಗೆ , ಸಂಜೆ ಶಾಲೆಗೆ ಹೋಗಿ ಬರುವ ಸಮಯದಲ್ಲಿ ತಪ್ಪದೆ ಬರ್ತದೆ” …
ಇದು ಸಾಮಾನ್ಯವಾಗಿ ನಮ್ಮೂರಿನ ಮಳೆಗಾಲದಲ್ಲಿ ಕೇಳಿಬರುವಂತ ಡೈಲಾಗ್. ಅಂದ ಹಾಗೆ ನಮ್ಮ ಊರಿನ ಮಳೆ ಅಂದ್ರೆ ಹಾಗೆ ಈ ಹರೆಯದ ಹುಡುಗಿಯ ಹಿಂದೆ ಅಲೆಯುವ ಹುಡುಗರಂತೆ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವ ವೇಳೆಗೆ ತಪ್ಪದೆ ಹಾಜರಾಗುತ್ತೆ.

ಆ ಮಳೆಗೆ ನಮ್ಮಂತ ವಿದ್ಯಾರ್ಥಿಗಳ ಮೇಲೆ ಅದೇನು ಲವ್ವೋ ಗೊತ್ತಿಲ್ಲ ಶಾಲೆಗೆ ಹೋಗಿ ಬರುವ ಹೊತ್ತಿಗೆ ಸುರಿದು ಇನ್ಯಾವತ್ತು ಈ ಮಳೆಯಲ್ಲಿ ಶಾಲೆಗೆ ಹೋಗೋದೇ ಬೇಡ ಎಂದೆನಿಸುವ ಮಟ್ಟಿಗೆ ನಮ್ಮನ್ನು ತೊಯ್ದು ತೊಪ್ಪೆಯಾಗಿಸುತ್ತೆ…

Loading...

ಇವಾಗೆಲ್ಲ ಒದ್ದೆಯಾಗೋದು Irritation ಅಂತ ಅನಿಸಿದರೂ ನಮ್ಮ ಬಾಲ್ಯದಲ್ಲಿ ಹೀಗಿರಲಿಲ್ಲ ಅವಾಗೆಲ್ಲ ಒದ್ದೆಯಾಗೋದು ಅಂದ್ರೆ ಏನೋ ಒಂಥರ ಮಜಾ.
ನನ್ನ ಬಾಲ್ಯ ಅಂದಾಗ ನೀವು ಐವತ್ತು-ಅರವತ್ತು ವರ್ಷ ಹಿಂದೆ ಅನ್ಕೋಬೇಡಿ ನನಗೀಗ ಇಪ್ಪತ್ತ ಮೂರು ವರುಷ ಹಾಗಾಗಿ ನಾನು ಹೇಳೋದು ಸುಮರು 18-20 ವರ್ಷದ ಹಿಂದಿನ ನನ್ನ ಬಾಲ್ಯದ ಮಳೆಗಾಲದ ಕಥೆ..

ಅವಾಗೆಲ್ಲ ಅದೇನು ಮಳೆ ಅಂತೀರಾ ಶಾಲೆಗೆ ಹೊರಡುವ ಸಮಯದಲ್ಲಿ ಗಾಳಿ ಮಳೆ ಬಂತು ಅಂದ್ರೆ ನಮ್ಮ ಕೊಡೆಗಳೆಲ್ಲ ಉಲ್ಟಾ ಮಡಚಿಕೊಂಡು ಹಳೇ ಕಾಲದ ಟೀವಿ ಡಿಶ್ ಥರ ಆಗುತಿತ್ತು.😊
ದಾರಿಯುದ್ದಕ್ಕೂ ಸಾಗುವ ಹಾದಿಯಲ್ಲಿ ಕೊಡೆ ತಿರುಗಿಸುತ್ತಾ ಪಕ್ಕದಲ್ಲಿದ್ದವರನ್ನು ಒದ್ದೆ ಮಾಡದಿದ್ದರೆ ನಮಗೂ ಸಮಧಾನವಿರಲಿಲ್ಲ. ಇನ್ನೂ ಅಲ್ಲಲ್ಲಿ ನಿಂತಿರುವ ನೀರು ಕಂಡೊಡನೆ ಛಂಗನೆ ಕುಣಿದು ಕುಪ್ಪಳಿಸಿದಾಗ ನೀರು ಒಂದಿಂಚು ಮೇಲೆ ಹಾರಿದರೆ ಸಾಕು ನಮ್ಮ ಮನಸ್ಸು ಆ ಖುಷಿಯಲ್ಲೆ ಆಕಾಶದೆತ್ತರಕ್ಕೆ ಹಾರುತಿತ್ತು.
ಶಾಲೆಗೆ ಹೋಗಿ ಸಂಜೆ ಮನೆಸೇರುವಷ್ಟರಲ್ಲಿ ನಮ್ಮ ಬಿಳಿ ಅಂಗಿಯೆಲ್ಲಾ ಇದು ನಿಜವಾಗಿಯೂ ಬಿಳಿ ಅಂಗಿಯೇನೋ ಎಂದು ನೀರಲ್ಲಿ ಅದ್ದಿ ತೆಗೆದ ಮೇಲೆಯೇ ತಿಳಿಯುವಷ್ಟು ಗಲೀಜಾಗಿರುತಿತ್ತು.! ನಮ್ಮ ಅವತಾರ ನೋಡಿದ ಅಮ್ಮ
” ನೀನು ಶಾಲೆಗೆ ಹೊಗಿದ್ದಾ ಇಲ್ಲಾ ಗದ್ದೆ ಕೆಲಸಕ್ಕೆ ಹೋಗಿದ್ದಾ ಗದ್ದೆ ಕೆಲಸಕ್ಕೆ ಹೋದವರು ಕೂಡ ನಿನಗಿಂತ ನೀಟಾಗಿ ಬರ್ತಾರಲ್ವೋ.” ಎಂದು ಬಾಯ್ತುಂಬ ಬೈತಿದ್ರು
ಪುಣ್ಯಕ್ಕೆ ನಮ್ಮ ಅಮ್ಮ ಅಪ್ಪಟ ಕರಾವಳಿಯವರಾಗಿರುವುದರಿಂದ ಲೋಫರ್, ಗೀಪರ್ ಅನ್ನದೆ ಅಚ್ಚಗನ್ನಡದಲ್ಲಿ ಸ್ವಚ್ಛವಾಗಿ ಬೈತಿದ್ರು.
ನನಗೆ ಅವಾಗಲೇ ಅಮ್ಮನ ಕೈಯಲ್ಲಿ ಬೈಸ್ಕೊಳ್ಳೋದರಲ್ಲು ಒಂಥರ ಸುಖವಿದೆ ಅನ್ನುವ ನಿಜದ ಅರಿವಾಗಿದ್ದು.

ಅದು 2000 ಇಸವಿ ಆಗೆಲ್ಲಾ ಇನ್ನೂ ನಮ್ಮ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಗದ್ದೆಗಳು ಇದ್ದ ಕಾಲವದು. ನಾವು ಶಾಲೆಗೆ ಹೋಗುವ ದಾರಿ ಮದ್ಯೆ ಹೊಲ, ಗದ್ದೆಗಳಲ್ಲಿ ಉಳುಮೆ ಮಾಡುತ್ತಿದ್ದವರನ್ನು ಕಣ್ಣಾರೆ ಕಂಡು ಖುಷಿಪಡುವ ಭಾಗ್ಯ ನಮ್ಮದಾಗಿತ್ತು. ಅಂದು ಕೂಡ ಇವಾಗೀನ ಥರ ಬಿಟ್ಟು ಬಿಡದೇ ದಿನಪೂರ್ತಿ ಮಳೆ ಬಂದರೂ ನಮಗ್ಯಾವ ಭಯನೂ ಇರಲಿಲ್ಲ. ಯಾಕಂದ್ರೆ ಜೋರು ಮಳೆಬಂದು ತೋಡುಗಳಲ್ಲಿ (ನೀರಿನ ತೊರೆ) ನೀರು ಜಾಸ್ತಿಯಾದರೆ ಮನೆಯವರು ಬಂದು ನಮ್ಮನ್ನೆಲ್ಲಾ ತೋಡು ದಾಟಿಸುತ್ತಿದ್ದರು, ಅಲ್ಲಿ ನಮ್ಮ ಮಕ್ಕಳು ಇನ್ನೊಬ್ಬರ ಮಕ್ಕಳು ಅನ್ನುವ ಬೇಧಭಾವವಿಲ್ಲ ಎಲ್ಲಾ ಮಕ್ಕಳನ್ನು ತೋಡು ದಾಟಿಸಿ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಿದ್ದವರು ಅನೇಕರಿದ್ದರು.

ಇನ್ನೂ ನಮ್ಮ ಕರಾವಳಿಯಲ್ಲಿ ಮಳೆಗಾಲ ಅಂದರೆ ಬರೀ ಮಳೆ ಬರುವ ಕಾಲವಾಗಿರಲಿಲ್ಲ ಮಳೆಗಾಲ ಅಂದ್ರೆ ಅದು ಮಳೆಯ ಜೊತೆಜೊತೆಗೆ ಹಲವಾರು ಸಂಭ್ರಮದ ಕ್ಷಣಗಳನ್ನು ಹೊತ್ತು ತರುವ ಕಾಲವಾಗಿತ್ತು. ಮಳೆಗಾಲದಲ್ಲೆ ಆಟಿ(ಆಷಾಡ ಮಾಸ) ಬರುವುದರಿಂದ ಆಟಿಯಲ್ಲಿ ಮಾತ್ರ ಸವಿಯುವಂತ ವಿಶೇಷ ಪತ್ರೊಡೆ(ಕೆಸುವಿನ ಎಲೆಯಲ್ಲಿ ಮಾಡುವ ಒಂದು ಬಗೆಯ ತಿನಿಸು), ಕಣಿಲೆ ಪದಾರ್ಥ, ಹೀಗೆ ಬಗೆಬಗೆಯ ತಿಂಡಿ,ತಿನಿಸುಗಳು ಹಪ್ಪಳ, ಸಂಡಿಗೆಗಳು,
ಆಟಿಯಲ್ಲಿ ಮಾತ್ರ ಆಡುವಂತ ಚೆನ್ನೆಮಣೆ ಮುಂತಾದ ಆಟಗಳೆಲ್ಲ ಶುರುವಾಗಿ ಪ್ರತಿಮನೆಯಲ್ಲೂ ಒಂಥರ ಸಂಭ್ರಮದ ವಾತವರಣ ಮೂಡುತಿತ್ತು. ಹೀಗೆ ಅಂದಿನ ದಿನಗಳಲ್ಲಿ ಮಳೆಗಾಲವನ್ನು ಕೂಡ ಸಂಭ್ರಮ, ಸಡಗರದಿಂದ ಆಸ್ವಾದಿಸುವ ಸ್ಥಿತಿಯಿತ್ತು.

ಆದರೆ ಇವತ್ತು ಮಳೆಗಾಲ ಶುರುವಾಯ್ತು ಅಂದ್ರೆ ಸಾಕು ಮನದೊಳಗೆ ಒಂಥರ ಭಯದ ಕಾರ್ಮೋಡ ಆವರಿಸುತ್ತದೆ ಹೌದು ಈಗ ಮಳೆಗಾಲ ಅಂದರೆ ಸಾಕಪ್ಪಾ ಸಾಕು ಈ ಮಳೆಗಾಲ ಅನಿಸುವಂತ ಸ್ಥಿತಿ ಬಂದೊದಗಿದೆ ಈ ಪ್ರವಾಹ, ಈ ಭೂಕುಸಿತ, ಈ ಪ್ರಾಣಹಾನಿ,ಅನ್ನ ನೀರಿಗಾಗಿ ಹಾಹಾಕಾರ ಇವೆಲ್ಲಾ ಯಾವಾಗ ಕೊನೆಯಾಗುತ್ತೋ ಎಂದು ಕಾಯುವಂತಾಗಿದೆ ನಮ್ಮವರ ಪರಿಸ್ಥಿತಿ…

ಎಲ್ಲೊ ಒಂದು ಕಡೆ ಈ ಎಲ್ಲಾ ಅತಿವೃಷ್ಟಿಗೆ ಮೂಲ ಕಾರಣ ಹುಡುಕಿದರೆ ಸಿಗುವ ಉತ್ತರ ನಾವೇ ಮನುಷ್ಯನ ದುರಾಸೆಯೇ ಇವೆಲ್ಲದಕ್ಕೂ ಕಾರಣ.
ಹೌದು ಕಷ್ಟವಾದರೂ ನಮ್ಮ ಆತ್ಮಸಾಕ್ಷಿಯಾಗಿ ಒಪ್ಪಿಕೊಳ್ಳಲೇ ಬೇಕಾದ ನಗ್ನಸತ್ಯವಿದು
ಈ ಹಿಂದೆಯೂ ಕೂಡ ಇದೇ ಥರ ಕುಂಭದ್ರೋಣ ಮಳೆ ಸುರಿಯುತಿತ್ತು ಆದರೆ ಆಗೆಲ್ಲ ಇಷ್ಟರ ಮಟ್ಟಿಗೆ ಹಾನಿಯಾಗಿರಲಿಲ್ಲ ಕಾರಣ ಆಗಸದಿಂದ ಮಳೆ ಹನಿಯಾಗಿ ಸುರಿಯುವ ನೀರನ್ನು ಮುಂದಿನ ದಿನಗಳಿಗೆ ಶೇಖರಿಡಲು ಕೆರೆ,ಕಟ್ಟೆ, ಬಾವಿ,ಕೊಳ, ಇಂಗುಗುಂಡಿ ಮುಂತಾದ ವ್ಯವಸ್ಥೆಗಳಿದ್ದು ಬೇಕಾದಷ್ಟು ನೀರನ್ನು ಮಾತ್ರ ಹಿಡಿದಿಟ್ಟುಕೊಂಡು ಉಳಿದ ನೀರು ಸಮರ್ಪಕವಾಗಿ ಹರಿದು ಹೋಗಲು ನದಿ,ತೊರೆ,ಹಳ್ಳಗಳಿದ್ದವು ಹಾಗಾಗಿ ಎಷ್ಟೇ ಮಳೆಬಂದರೂ ಅದಕ್ಕೆ ಸಮರ್ಪಕವಾದ ವ್ಯವಸ್ಥೆಗಳಿದ್ದವು..

ಆದರೆ ಈಗ ಹಣ, ಅಧಿಕಾರ, ಇನ್ನೂ ಬೇಕು ಬೇಕೆನ್ನುವ ವ್ಯಾಮೋಹ, ದರ್ಪಗಳೆಲ್ಲ ಅತೀಯಾಗಿ ಅಭಿವೃದ್ಧಿ ಅನ್ನುವ ಹೆಸರಿನಲ್ಲಿ ಅವ್ಯಾಹತವಾಗಿ ನಾವು ಪರಿಸರ, ಪ್ರಕೃತಿಯ ಮೇಲೆ ನಡೆಸುವ ಅತ್ಯಾಚಾರ, ಅನಾಚಾರಗಳು ಅಷ್ಟಿಷ್ಟಲ್ಲ ಊಹಿಸಲು ಅಸಾಧ್ಯವೆನುವಷ್ಟರ ಮಟ್ಟಿಗೆ ನಾವು ನಮ್ಮ ಪರಿಸರವನ್ನು ಹಾಳುಗೆಡವುತ್ತಿದ್ದೇವೆ.

ಒಂದೆಡೆ ಇಲ್ಲಿನ ಜೀವ ಜಲವನ್ನೇ ಕಿತ್ತುಕೊಂಡು ನದಿ ಹರಿವನ್ನೆ ತಿರುಗಿಸಿ ಬೇರೆಡೆಗೆ ನೀರುಣಿಸುವ ಪ್ರಯತ್ನ ಮಾಡ್ತೀವಿ, ಕಾಡುಗಳನೆಲ್ಲಾ ಕಡಿದು ಹೈಟೆಕ್ ಕನಸುಗಳೊಂದಿಗೆ ಮರಗಳ ಮಾರಣಹೋಮ ಮಾಡುತ್ತೀವಿ, ನೀರು ಹರಿದು ಹೋಗುತ್ತಿದ್ದ ಜಾಗವೆಲ್ಲಾ ಆಕ್ರಮಿಸಿ ಮನೆ ಕಟ್ಟಿ ನೆಮ್ಮದಿಯಾಗಿ ಬದುಕುವ ಆಸೆ ಪಡುತ್ತೀವಿ , ಭ್ರಷ್ಟ ಅಧಿಕಾರಿಗಳ ಕೈ ಬಿಸಿ ಮಾಡಿ ಭೂತಾಯಿ ಒಡಲನ್ನು ಅಗೆಯುವಷ್ಟು ಅಗೆದು ಸುಖವಾಗಿ ಬಾಳುವ ಕನಸು ಕಾಣುತ್ತೀವಿ.

ನಾವು ಹುಟ್ಟುವುದರಿಂದ ಹಿಡಿದು ಆಡಿದ್ದು, ಬೆಳೆದದ್ದು, ತಿಂದಿದ್ದು, ಬದುಕೋದು, ಉಸಿರಾಡೋದು, ಉಸಿರು ನಿಂತಮೇಲೆ ಲೀನವಾಗೋದು ಹೀಗೆ ಎಲ್ಲಾನೂ ಇದೇ ಪ್ರಕೃತಿಯಲ್ಲಿ.
ಪ್ರಕೃತಿ ನಮಗೆ ಇಷ್ಟೆಲ್ಲಾ ಕೊಟ್ಟಿದ್ದರೂನು ನಾವು ಮತ್ತೆ ಮತ್ತೆ ಆ ಪ್ರಕೃತಿಯ ವಿರುದ್ಧವೇ ನಡೆಯುತ್ತೀವಿ ಅಂದ್ರೆ ನಾವು ನಿಜವಾಗಿಯೂ ಸುಶಿಕ್ಷಿತರಾದ ಆಧುನಿಕ ಮೂಢರೆ ಸರಿ.

ಇನ್ನಾದರೂ ಎಚ್ಚೆತ್ತುಕೊಳ್ಳಣ ಪ್ರಕೃತಿ ಮುನಿಸಿನ ಈ ಎಚ್ಚರಿಕೆಯ ಕರೆಗಂಟೆಯ ಅರಿತು ನಡೆಯೋಣ.
ಪರಶುರಾಮ ಸೃಷ್ಟಿಯ ಈ ಪುಣ್ಯ ಭೂಮಿಯಲಿ ಜನಿಸಿ ನಮ್ಮ ಆಚಾರ ವಿಚಾರ ಸಂಸ್ಕೃತಿ, ಪ್ರಕೃತಿಯನ್ನು ದೇವರೆಂದು ಆರಾಧಿಸಿಕೊಂಡು ಬಂದು ದೈವ ದೇವರುಗಳ ಮೇಲೆ ಅಪಾರ ಶ್ರದ್ಧಾ ಭಕ್ತಿ ನಂಬಿಕೆಯಿರುವ ನಾವು ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ನಡೆಸೋಣ ನಮ್ಮವರ ಸುಂದರ ನಾಳೆಗಾಗಿ, ಸುಭದ್ರ ನಾಳೆಗಾಗಿ ಮರಗಿಡಗಳ ಬೆಳೆಸಿ, ಉಳಿಸಿ ನೆಮ್ಮದಿಯ ಬದುಕನ್ನು ಸಾರ್ಥಕಗೊಳಿಸೋಣ.
-ಭರತ್

  • 32
    Shares

ಕಮೆಂಟ್ ಮಾಡಿ

ಟ್ರೆಂಡಿಂಗ್ ಸುದ್ದಿಗಳು

ಫೇಸ್ಬುಕ್ ಪುಟ ಲೈಕ್ ಮಾಡಿ

ಜಾಹೀರಾತುಗಳು

Loading...